ಕೆಸರು ಮೀನು	

ಹೋಲೋಸ್ಟಿಯೈ ಅಧಿಗಣದ ಏಮಿಯಿಡೆ ಕುಟುಂಬಕ್ಕೆ ಸೇರಿದ ಅಸ್ಥಿಮೀನು. ಏಮಿಯ ಕಾಲ್ವ ಇದರ ಶಾಸ್ತ್ರೀಯ ನಾಮ.  ನಾಯಿಮೀನು, ಗ್ರಿಂಡಲ್, ಸ್ಪಾಟಫಿನ್, ಬೋವ್ ಫಿನ್ ಇತರೆ ಸಾಮಾನ್ಯ ಹೆಸರು. ಉತ್ತರ ಅಮೆರಿಕದ ಒಳನಾಡಿನ ಜಲಾಶಯಗಳಲ್ಲೆಲ್ಲ ಕಾಣಬರುತ್ತದೆ. ಸಾಧಾರಣವಾಗಿ 60 ಸೆಂಮೀ. ಉದ್ದಕ್ಕೆ ಬೆಳೆಯುವುದಾದರೂ ಅಪೂರ್ವವಾಗಿ 90 ಸೆಂ.ಮೀ. ಉದ್ದವೂ 3.5 ಕೆಜಿ. ತೂಕವು ಇರುವುದುಂಟು. ನೀಳವಾದ ಬೆನ್ನಿನ ರೆಕ್ಕೆ ಮತ್ತು ಬಾಲದ ರೆಕ್ಕೆಯ ಮೇಲ್ಭಾಗದಲ್ಲಿರುವ ಕಪ್ಪು ಮಚ್ಚೆಯಿಂದ ಈ ಮೀನನ್ನು ಗುರುತಿಸಬಹುದು. ಇವು ಇತರೆ ಮೀನುಗಳನ್ನು ಅಕಶೇರುಕಗಳನ್ನು ತಿಂದು ಬದುಕತ್ತವೆ. ಗೂಡು ಕಟ್ಟುವುದು, ಮೊಟ್ಟೆ ಮತ್ತು ಮರಿಗಳನ್ನು ಪಾಲಿಸುವುದು ಗಂಡು ಮೀನಿನ ಕೆಲಸ. ಫುಪ್ಪುಸ ಮೀನನ್ನೂ (ಲಂಗ್‍ಫಿಶ್) ಮತ್ತು ಅಂಬ್ರಿಡೀ ಕುಟುಂಬದ ಮೀನುಗಳನ್ನೂ ಕೆಸರು ಮೀನುಗಳೆಂದು ಕರೆಯುವುದಿದೆ.     
								(ಸಿ.ಜಿ.ಕೆ.)